Tuesday, January 5, 2016

ಮತ್ತೊಮ್ಮೆ ಸುಮ್ನೆ ಹರಟೆ (ಮರಳಿ ಬ್ಲಾಗಿಗೆ)

ಎಲ್ಲರಿಗೂ ೨೦೧೬ ನೆ ವರ್ಷದ ಶುಭಾಶಯಗಳು. ಈ ವರ್ಷ ನಮ್ಮೆಲ್ಲರ ಸಮಸ್ಯೆಗಳನ್ನು ದೂರ ಮಾಡಿ, ಮನುಷ್ಯ-ಮನುಷ್ಯರುಗಳ ನಡುವಿನ ಸಂಬಂಧ ಹಾಗು ಭಾಂದವ್ಯಗಳನ್ನು ಉತ್ತಮಪಡಿಸಲಿ ಎಂದು ಆಶಿಸೋಣ. ನಾನು ಬಹಳ ದಿನಗಳ ನಂತರ ಈ ಬ್ಲಾಗಿನಲ್ಲಿ ಮತ್ತೆ ಬರೆಯುತ್ತಿದ್ದೇನೆ. ’ಯಾಕೆ ಇಷ್ಟು ದಿನ (ಹೆಚ್ಚೂ ಕಡಿಮೆ ೩ ವರ್ಷ) ಗಳ ಕಾಲ ನಾನು ಇಲ್ಲಿ ಬರೆಯಲಿಲ್ಲ’ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿ ಉತ್ತರಿಸ ಹೊರಟರೆ, ನಾನು ಬರೆಯದಿದ್ದಕ್ಕೆ ಅನಗತ್ಯ ಸಮರ್ಥನೆಯನ್ನು ಕೊಡುವ ಕಾರ್ಯ ನನ್ನ ಪಾಲಿಗೇ ಬರುತ್ತದೆ. ಬಹುಶಃ ಆ ಕೆಲಸ ಬೇಡ. ಆದರೆ ಒಂದಂತೂ ನಿಜ, ನಾನು ಆರೋಗ್ಯವಾಗಿ, ಖುಷಿಯಾಗಿದ್ದೇನೆ. ಈಗ ಇದನ್ನು ಬರೆಯುತ್ತಿದ್ದೇನೆ ಎಂದಾದ ಮೇಲೆ, ಖಂಡಿತಾ ನಾನು ಬದುಕಿದ್ದೇನೆ! ಬೆಂಗಳೂರಿನ ಬದುಕು ಹಾಗು ಪ್ರಯಾಣ ನಾನು ಬೇರೆ ಕೆಲಸಗಳಿಗೆ ಮೀಸಲಿಡುತ್ತಿದ್ದ ಸಮಯವನ್ನು ಸ್ವಲ್ಪ ಮಟ್ಟಿಗೆ ತಿಂದು ಹಾಕಿರುವುದು ಸುಳ್ಳಲ್ಲ. ಜೊತೆಯಲ್ಲಿ ನನ್ನ M.Sc ವ್ಯಾಸಂಗವೂ ಸ್ವಲ್ಪ ಹೆಚ್ಚೇ ಸಮಯವನ್ನು ಬೇಡುತ್ತದೆ. ಇರಲಿ, ಇಷ್ಟು ದಿನ ನಾನು ಬ್ಲಾಗಿನಿಂದ ದೂರವಿದ್ದುದು ಅಷ್ಟು ಸರಿಯಲ್ಲ ಎಂದು ನನಗನಿಸಿದೆ. ಆದರೆ, ಮತ್ತೆ ಬರೆಯಲು ಸುಮ್ನೆ ಏನಾದ್ರು ಬೇಕಲ್ಲ. ದೇಶ-ವಿದೇಶಗಳಲ್ಲಿ ಏನೇನೋ ನಡೆಯುತ್ತಿದೆ. ಸಾವು-ನೋವು, ಭಯೋತ್ಪಾದನೆ, ಹಿಂಸೆ, ಇವನ್ನು ನೋಡಿದರೆ ಮಾನವೀಯತೆ ಸತ್ತೇ ಹೋಗಿದೆ ಅನಿಸುತ್ತದೆ. ಇದನ್ನೆಲ್ಲ ಬರೆಯಲು ಅನೇಕರಿದ್ದಾರೆ, ಇದರ ತಲೆ ಬಿಸಿ ನನ್ನದಲ್ಲ. ಈಗ ನಾನು ಬರೆಯಹೊರಟಿರುವುದು ನಾನು ಇತ್ತೀಚೆಗೆ ಕೇಳಿದ ಒಂದು ಕನ್ನಡ ಸಿನಿಮಾ ಹಾಡಿನ ಬಗೆಗೆ. ಒಂದು ಹಾಡನ್ನು ವಿಮರ್ಶೆ ಮಾಡುವಷ್ಟು ಆಳವಾದ ಹಾಗು ವಿಸ್ತಾರವಾದ ಜ್ಞಾನ ನನಗಿದೆ ಎಂದು ನನಗನಿಸುತ್ತಿಲ್ಲ. ಆದರೆ, ಆ ಹಾಡು ನನ್ನನ್ನು ಹೇಗೆ ಮುಟ್ಟಿತು ಎಂದಷ್ಟೇ ನಾನು ಹೇಳಬಲ್ಲೆ. ನನಗೆ ಯೋಗರಾಜ ಭಟ್ಟರ ಹಾಡುಗಳು ತುಂಬಾ ಇಷ್ಟ. ನಾನು ಕೇಳಿದಂತೆ ಹಾಗು ಅರ್ಥೈಸಿಕೊಂಡಂತೆ ಅವರ ಹಾಡುಗಳಲ್ಲಿ ತಿಳಿ ಹಾಸ್ಯದ ಮೂಲಕ ತತ್ವಜ್ಞಾನದ ದರ್ಶನವಿರುತ್ತದೆ. ನನಗೆ ಭಟ್ಟರ ’ಡ್ರಾಮ’ ಸಿನಿಮಾದ ’ಬೊಂಬೆ ಆಡ್ಸೋನು’ ಹಾಡು ಜೀವನದ ಸತ್ಯವನ್ನು ಹೇಳುವ ಕಿರುಹೊತ್ತಿಗೆಯಂತೆ ಕಾಣುತ್ತದೆ. ಪರಮಾತ್ಮ ಸಿನಿಮಾದ ’ಕತ್ಲಲ್ಲಿ ಕರ್ಅಡಿಗೆ’ ಹಾಗೆಯೇ ಪಂಚರಂಗಿಯ ’ಲೈಫು ಇಷ್ಟೆನೆ’ ಹಾಡುಗಳು ಒಂದೊಂದು ತತ್ವಗಳನ್ನು ಹೇಳುತ್ತವೆ ಎಂಬುದು ನನ್ನ ಅನಿಸಿಕೆ. ಈ ಸಮಯಕ್ಕೆ ನನ್ನ ಮನ ಮುಟ್ಟಿದ ಮುಖ್ಯ ಹಾಡು ಅಂದರೆ, ’ಪರಪಂಚ’ ಸಿನಿಮಾಗಾಗಿ ಭಟ್ಟರು ಬರೆದ ’ಹುಟ್ಟಿದ ಊರನು ಬಿಟ್ಟು ಬಂದ ಮೇಲೆ’ ಹಾಡು. ಈ ಹಾಡು ಬಹುಶಃ ಅನಿವಾರ್ಯವಾಗಿ ನಗರ ಜೀವನದತ್ತ ಒಲಸೆ ಬಂದ ನನ್ನಂತವರ ಮನಸ್ಸಿನ ಒಳಗೆ ಹೋಗಿ ಈ ಬಗೆಯ ವಲಸೆಗೆ ಕಾರಣ ಹುಡುಕಲು ಹಚ್ಚದೇ ಇರದು. ಫೈರಿಂಗ್ ಶ್ಟಾರ್ ವೆಂಕಟ್ (ಹುಚ್ಚಾ ವೆಂಕಟ್) ಈ ಹಾಡಿಗೆ ಜೀವ-ಭಾವ ತುಂಬಿ ಹಾಡಿದ್ದಾರೆ. ನಾನು ನೋಡಿದ ಈ ಹಾಡಿನ ಪ್ರೋಮೋದಲ್ಲಿ ವೆಂಕಟ್ ಅವರು ತಮ್ಮ trademark ಶೈಲಿಯಲ್ಲಿ ಪಂಚಿಂಗ್ ಡೈಲಾಗುಗಳನ್ನು ಹೊಡೆದು ಸಖತ್ ಮಜಾ ಕೊಟ್ಟಿದ್ದಾರೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಈ Youtube ಕೊಂಡಿಯನ್ನು ಕ್ಲಿಕ್ಕಿಸಿ ನೀವೂ ನೋಡಬಹುದು. ’ಪರಪಂಚ’ teamಗೆ ನನ್ನ ಕಡೆಯಿಂದ ಒಂದು ’all the best'